ಓದುವ ಅಭಿರುಚಿ ಬೆಳೆದಿದ್ದು ಕನ್ನಡ ವಾರ ಪತ್ರಿಕೆ ತರಂಗದ ಬಾಲವನದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಕಾರಂತಜ್ಜನ ಪುಟ ಹಾಗೂ ಮಕ್ಕಳ ಕಥೆಗಳು, ಪುಟ್ಟ ಕವನಗಳಿಂದ ನಂತರ ಚಿನಕುರಳಿ ಹಾಸ್ಯ ಹಾಗೊಮ್ಮೆ ಹೀಗೊಮ್ಮೆ ಸಿನಿಮಾ ಪುಟಗಳನ್ನು ತಿರುವುತ್ತಾ ತಿರುವುತ್ತಾ ಪ್ರತಿವಾರ ನಮ್ಮ ಮನೆಗೆ ತರಂಗ ಬರುವುದನ್ನೆ ಕಾತುರದಿಂದ ಕಾಯುತ್ತಿದ್ದೆವು. ಹೀಗೆ ಬೆಳೆದ ಪುಸ್ತಕದೊಳಗಿನ ನಂಟು ಬಿಡಿಸದ ಬಂಧನವಾಯಿತು. ತರಂಗದೊಂದಿಗೆ ಸುಧಾ, ರೂಪತಾರ ಗೃಹಶೋಭಾ,ವಿಜಯಚಿತ್ರ, ದೀಪಾವಳಿ ವಿಶೇಷಾಂಕಗಳು, ತಿಂಗಳಿಗೊಂದು ಹಂಸರಾಗ, ಚಂಪಕ, ಬಾಲಮಿತ್ರ, ಪ್ರತಿವಾರ ತಪ್ಪದೇ ತರುತ್ತಿದ್ದ ಲಂಕೇಶ್ ಪತ್ರಿಕೆ, ಮತ್ತೇ ಹೊಸತನದಿಂದ ಮೂಡಿ ಬಂದ ಹಾಯ್ ಬೆಂಗಳೂರು ಪ್ರತಿದಿನ ಬರುತ್ತಿದ್ದ ಕನ್ನಡ ಪ್ರಭ ಇವಿಷ್ಟು ನಮ್ಮ ಮನೆಯ ಟೇಬಲ್ ಅಲಂಕರಿಸುತ್ತಿದ್ದವು. ಯಾವುದು ಓದುವುದು ಯಾವುದು ಬಿಡುವುದು, ಎಲ್ಲವೂ ಹೊಸ ಹೊಸ ವಿಷಯಗಳನ್ನು ಹೊತ್ತು ತರುತ್ತಿದ್ದವು. ಇದರ ಜೊತೆಗೆ ಶಾಲಾಪುಸ್ತಕಗಳನ್ನು ಓದಬೇಕಿತ್ತು. ಈ ಓದುವ ಹವ್ಯಾಸ ಬೆಳೆಸಿಕೊಂಡು ಶಾಲೆಯಲ್ಲಿ ಗುರುಗಳು ಕೊಟ್ಟ ಮನೆ ಕೆಲಸವನ್ನು ಕಾಟಾಚಾರಕ್ಕೆ ತಿದ್ದಿ ರೂಲ್ ದೊಣ್ಣೆಯಿಂದ ಏಟು ತಿಂದ ನೆನಪುಗಳು ಇವೆ. ಆದರೂ ನಿಯತಕಾಲಿಕಗಳ ಮೇಲಿನ ವ್ಯಾಮೋಹ ಮಾತ್ರ ಹೋಗುತ್ತಿರಲಿಲ್ಲ. ಇದರ ಜೊತೆಗೆ ಗ್ರಂಥಾಲಯದಿಂದ ತರುತ್ತಿದ್ದ ಬೆಕ್ಕಿನ ಕಣ್ಣು, ತಾಮ್ರದ ತಂಬಿಗೆ, ಹಣ್ಣೆಲೆ ಚಿಗುರಿದಾಗ, ಪ್ರೇಮ ಪಲ್ಲವಿ, ಚಂದ್ರಮ, ನನ್ನ ನಿನ್ನ ನಡುವೆ, ಇನ್ನೂ ಹಲವಾರು ಕಾದಂಬರಿಗಳು ಓದುವ ಮನಸ್ಸನ್ನು ಸೆರೆಹಿಡಿದುಬಿಟ್ಟಿದ್ದವು. ಪ್ರತಿವಾರ ತರಂಗದಲ್ಲಿ ಪ್ರಕಟವಾಗುತ್ತಿದ್ದ ಕಪ್ಪಂಚು ಬಿಳಿ ಸೀರೆ ಧಾರಾವಾಹಿಯಂತೂ ವಾರಪತ್ರಿಕೆ ಬರುವುದು ತಡವಾದರೆ ಮನ ಮಿಡುಕುತ್ತಿತ್ತು.
ಶ್ರೀ ಮತಿ ರೇಖಾ ಕಾಖಂಡಕಿಯವರು ಬರೆದ ಬಯಲು ಆಲಯ ಮನಸೂರೆಗೊಂಡು ಧಾರಾವಾಹಿ ಓದುವ ಹುಚ್ಚು ಹಿಡಿಸಿ ಬಿಟ್ಟಿತ್ತು. ಓದುತ್ತಾ ಓದುತ್ತಾ ಅವರ ಪುಟ್ಟ ಅಭಿಮಾನಿಯಾಗಿ ಪ್ರೌಢಶಾಲೆ ಓದುತ್ತಿರುವಾಗಲೇ ಅವರಿಗೆ ಅಂಚೆ ಕಾರ್ಡಿನಲ್ಲಿ ಪತ್ರ ಬರೆದು ಅಭಿಮಾನ ಸೂಚಿಸಿದೆ. ಇದಕ್ಕೆ ಪ್ರತಿಯಾಗಿ ಅವರೂ ಸಹ ಹಿಂದಿರುಗಿ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದಾಗ ನನಗಾದ ಸಂತಸ ಅಷ್ಟಿಷ್ಟಲ್ಲ. ಅವರು ಪತ್ರದಲ್ಲಿ ಅರುಣರಾಗ , ನಾನು ಬರೆದ ಕಾದಂಬರಿ ಸಿನಿಮಾ ಆಗಿದೆ ಎಂದು ತಿಳಿಸಿದ್ದರು. ಇದು ನನಗೆ ಇನ್ನೂ ಮಾಸದ ನೆನಪಾಗಿ ಉಳಿದಿದೆ.
ಹೀಗೆ ಓದುವ ಅಭಿರುಚಿ ಬೆಳೆಸಿಕೊಂಡು ನಾನು ನಾನೇ ಲೇಖನಗಳನ್ನು ಬರೆಯುವಷ್ಟು ಪ್ರಬುದ್ಧಳಾದೆ. ರಾಜಕೀಯ ಜ್ಞಾನ ಸಾಮಾಜಿಕ ಕಾಳಜಿಗಳು ದೇಶದ ಸ್ಥಿತಿಗಳ ಬಗ್ಗೆ ಕಿಂಚಿತ್ತಾದರೂ ಬೆಳಕು ಇದೆ ಎಂದರೆ ಅದಕ್ಕೆ ಪ್ರತಿ ವಾರ ಓದುತ್ತಿದ್ದ ಪಿ. ಲಂಕೇಶ್ ರವರ ಲಂಕೇಶ್ ಪತ್ರಿಕೆ ಎಂದರೆ ತಪ್ಪಾಗದು, ಬೆಳಿಗ್ಗೆ ಎದ್ದ ತಕ್ಷಣ ಪೇಪರ್ ಮುಂದಿಟ್ಟುಕೊಂಡು ಕೂರುವುದನ್ನು ಅಭ್ಯಾಸ ಮಾಡಿಕೊಂಡಿದ್ದ ನಾನು ಗೃಹಿಣಿಯರು ಮಾಡುವ ಮನೆ ಕೆಲಸಗಳನ್ನು ಕಲಿಯದೆ ಮನೆ ಮಂದಿಯೊಂದಿಗೆ ಬೈಸಿಕೊಂಡಿದ್ದು ಇದೆ. ಹೀಗೆ ಪುಸ್ತಕದ ಜೊತೆ ನನ್ನ ಸ್ನೇಹ ಈಗಲೂ ಮುಂದುವರೆದಿದೆ. ಆದರೆ ಮೊದಲಿನಷ್ಟಲ್ಲ. ಸಾಮಾಜಿಕ ಜಾಲತಾಣಗಳ ಸೆಳೆತಕ್ಕೆ ಸಿಕ್ಕಿ ಸ್ವಲ್ಪ ಕಡಿಮೆಯಾಗಿದೆ.
ಹೌದು ಇದು ನನಗೊಬ್ಬಳಿಗೆ ಅನ್ವಯಿಸುವುದಿಲ್ಲ, ನನ್ನಂತಹ ಸಾವಿರಾರು ಓದುಗರು ಇಂದು ಮೊಬೈಲ್ ಮಾಯಾಲೋಕಕ್ಕೆ ಸಿಲುಕಿ ಪುಸ್ತಕ ಓದುವವರ ಸಂಖ್ಯೆ ಗಮನಾರ್ಹ ಇಳಿಕೆಯಾಗಿದೆ. ಮೊನ್ನೆ ಕಾರ್ಯ ನಿಮಿತ್ತ ಬೆಂಗಳೂರಿಗೆ ಹೊರಟಾಗ ಮೊಬೈಲ್ ಬಳಕೆ ಕಡಿಮೆ ಮಾಡಲೆಂದು ಬುಕ್ ಸ್ಟೋರ್ ನಲ್ಲಿ ಒಂದು ವಾರಪತ್ರಿಕೆ ಕೇಳಿದಾಗ ಅಂಗಡಿಯಾತ ನಕ್ಕು ನುಡಿದ, ಮೇಡಂ ಈಗ ಪತ್ರಿಕೆಗಳು ಮೊದಲಿನಂತೆ ಬರುತ್ತಿಲ್ಲ ಓದುಗರ ಸಂಖ್ಯೆ ಇಳಿಕೆಯಾಗಿದೆ ಎಂದಾಗ ಬಹಳ ಬೇಜಾರಾಯಿತು.
ಎಷ್ಟು ಸತ್ಯ ಸಂಗತಿ ಅಲ್ಲವೇ, ಸಾವಿರಾರು ವಿಷಯಗಳನ್ನು ಒಡಲಲ್ಲಿ ಹುದುಗಿಸಿಕೊಂಡು ಓದುಗರಿಗೆ ರಸದೌತಣ ನೀಡುತ್ತಿದ್ದ ಪತ್ರಿಕೆಗಳು, ಕಾದಂಬರಿಗಳು, ಮಕ್ಕಳ ಕಥೆಗಳು,ಮುಂತಾದವುಗಳು ಇಂದು ಸತ್ವ ಕಳೆದುಕೊಂಡು ಮೂಲೆ ಸೇರುವುದರ ಜೊತೆಗೆ ಕಾಣದಂತೆ ಮಾಯವಾಗುತ್ತಿವೆ.ಮೊಬೈಲ್ ಬಳಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದ ಮೇಲಂತೂ ಪುಸ್ತಕ ಓದುವುದನ್ನು ಎಲ್ಲರೂ ಮರೆತಿದ್ದಾರೆ. ಇನ್ನು ಆನ್ಲೈನ್ನಲ್ಲಿ ಶಿಕ್ಷಣ, ಬಯಸಿದ ಚಲನಚಿತ್ರಗಳು, ಹಾಡುಗಳು, ಸಾಹಿತ್ಯ, ಅಡಿಗೆ,ಅಲಂಕಾರಗಳ ಬಗ್ಗೆ ಮಾಹಿತಿ ವಿಜ್ಞಾನ ರಾಜಕೀಯ, ಸಾಮಾಜಿಕ ಆರ್ಥಿಕ ವಿಷಯ ಮುಂತಾದವುಗಳ ಬಗ್ಗೆ ಜಗತ್ತಿನಲ್ಲಿ ನಡೆಯುವ ವಿದ್ಯಾಮಾನಗಳು ಕ್ಷಣಾರ್ಧದಲ್ಲಿ ಕುಳಿತ ಜಾಗದಲ್ಲೇ ವೀಕ್ಷಿಸುವಂತ ವಿಪುಲ ಅವಕಾಶಗಳನ್ನು ಈ ಜಂಗಮವಾಣಿ ಒದಗಿಸಿಕೊಟ್ಟಿರುವುದರಿಂದ ಮುಂದಿನ ತಲೆಮಾರಿನವರು ಪುಸ್ತಕ ಹೇಗೆ ಉಪಯೋಗಿಸುತ್ತಿದ್ದರು ಅದರಿಂದ ವಿಷಯ ಹೇಗೆ ತಿಳಿಯುತ್ತಿದ್ದರು ಎನ್ನುವುದನ್ನು ವಸ್ತು ಸಂಗ್ರಹಾಲಯದಲ್ಲಿ ನೋಡಬೇಕಾಗುತ್ತದೆಯೇನೋ ಅನಿಸುವುದುಂಟು. ಒಟ್ಟಿನಲ್ಲಿ ಜಂಗಮವಾಣಿಯ ಆಕರ್ಷಣೆಯಿಂದಾಗಿ ಓದುಗರ ಸಂಖ್ಯೆ ಕಡಿಮೆಯಾಗಿರುವುದಂತೂ ಸುಳ್ಳಲ್ಲ.
🖊️ ಕೀರ್ತಿ ಶ್ರೀ ಬಿ.ಜಿ.