ಗುಬ್ಬಿ: 26 ಸಾವಿರ ಕೋಟಿ ರೂಗಳ ಸಾಲ ಮನ್ನಾ ಮಾಡಿದ ಜೆಡಿಎಸ್ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರ ತಂದುಕೊಡುವ ನಿಟ್ಟಿನಲ್ಲಿ ಪಂಚರತ್ನ ಯೋಜನೆ ಕೈ ಹಿಡಿಯಲಿದೆ. ಈ ಭರವಸೆಯಲ್ಲೇ ಸಂಘಟನೆ ಮುಂದಾದ ಎಚ್.ಡಿ.ಕುಮಾರಸ್ವಾಮಿ ಅವರು ಹೋಬಳಿ ಮಟ್ಟದ ಸಂಘಟನೆಗೆ ಶೀಘ್ರದಲ್ಲೇ ಆಗಮಿಸಿ ಪಕ್ಷ ಬಲಗೊಳಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಕಸಬ ಹೋಬಳಿ ಬಿಕ್ಕೆಗುಡ್ಡ ಗ್ರಾಮದ ಶ್ರೀ ಬಸವೇಶ್ವರಸ್ವಾಮಿ ದೇವಾಲಯ ಆವರಣದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಲ್ಲದ ಆರೋಪ ಮಾಡುತ್ತಾ ಜೆಡಿಎಸ್ ಹೀಯಾಳಿಸುವರಿಗೆ ತಕ್ಕ ಉತ್ತರ ನೀಡುವ ಜೊತೆಗೆ ಮುಂದಿನ 2023 ಕ್ಕೆ ಮತ್ತೊಮ್ಮೆ ಮುಖ್ಯಮಂತ್ರಿ ಆಗಿ ರೈತರ ಹಿತ ಕಾಯಲಿದ್ದಾರೆ ಎಂದರು.
ಸಿ.ಎಸ್.ಪುರ ಜಿಪಂ ಕ್ಷೇತ್ರದಲ್ಲಿ ಬಿಜೆಪಿಯಿಂದ ಗುರುತಿಸಿಕೊಂಡಿದ್ದೆ. ಆದರೆ ಅಭಿವೃದ್ಧಿ ಕೆಲಸ ಮಾಡಲು ಸಾಕಷ್ಟು ಅನುದಾನ ಬಾರದೆ ಸರ್ಕಾರ ಮಟ್ಟದಲ್ಲಿ ಓಡಾಡಿ ಶ್ರಮವಹಿಸಿ 35 ಕೋಟಿ ರೂಗಳ ವಿಶೇಷ ಅನುದಾನ ತಂದು ಕೆಲಸ ಮಾಡಿದ್ದೆ. ಈ ಅನುಭವೇ ಗುಬ್ಬಿ ಕ್ಷೇತ್ರದಲ್ಲಿ ಬಳಸಿ ರಸ್ತೆ ಸೇರಿದಂತೆ ಹಲವು ಮೂಲಭೂತ ಸವಲತ್ತು ಒದಗಿಸಲು ಬದ್ಧನಾಗಿರುತ್ತೇನೆ ಎಂದು ಹೇಳಿದ ಅವರು ಗುಬ್ಬಿ ಇಂದಿಗೂ ಜೆಡಿಎಸ್ ಭದ್ರಕೋಟೆ ಎನಿಸಿದೆ. ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿದೆ. ಮನೆ ಮಗನಾಗಿ ಕೆಲಸ ಮಾಡುತ್ತೇನೆ. ಅಭಿವೃದ್ಧಿ ಒಂದೇ ಮಂತ್ರ ಪಠಿಸಿ ಪಕ್ಷ ಸಂಘಟನೆ ಮಾಡುವುದಾಗಿ ಭರವಸೆ ವ್ಯಕ್ತಪಡಿಸಿದರು.
ತಾಪಂ ಮಾಜಿ ಅಧ್ಯಕ್ಷೆ ಸಿದ್ದಗಂಗಮ್ಮ ಮಾತನಾಡಿ ನೋವು ನುಂಗಿ ಮೌನಕ್ಕೆ ಶರಣಾದ ಕಾರ್ಯಕರ್ತರು ಈಗ ಸಿಡಿದು ಹೊರಬಂದಿದ್ದಾರೆ. ನಾಗರಾಜು ಅವರಿಗೆ ಬೆನ್ನೆಲುಬಾಗಿ ಪಕ್ಷ ಕಟ್ಟಿ ದುಡಿಯಬೇಕಿದೆ. ಮುಂದಿನ ಚುನಾವಣೆಗೆ ಪಣ ತೊಟ್ಟು ದುಡಿಯಲು ಪಕ್ಷ ಉತ್ಸಾಹ ತುಂಬುವ ಕಾಯಕ ಮಾಡಲಿದೆ ಎಂದರು.
ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಚ್.ಡಿ.ಯಲ್ಲಪ್ಪ ಮಾತನಾಡಿ ರಾಜಕಾರಣಕ್ಕೆ ಜೆಡಿಎಸ್ ಪ್ರಾಥಮಿಕ ಶಿಕ್ಷಣ ನೀಡುತ್ತದೆ. ಕಲಿತ ನಂತರ ರಾಷ್ಟ್ರೀಯ ಪಕ್ಷಗಳತ್ತ ದಾಪುಗಾಲು ಹಾಕುತ್ತಾರೆ. ಇಂದಿಗೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಜೆಡಿಎಸ್ ಗರಡಿಯ ಕಲಿಗಳೇ ಇದ್ದಾರೆ. ಬರುವವರು ಬರಲಿ ಹೋಗುವವರು ಹೋಗಲಿ ತತ್ವ ಜೆಡಿಎಸ್ ಪಕ್ಷದಲ್ಲಿ ಸಾಮಾನ್ಯವಾಗಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್, ಪಪಂ ಮಾಜಿ ಅಧ್ಯಕ್ಷ ಜಿ.ಡಿ.ಸುರೇಶ್ ಗೌಡ, ಎಪಿಎಂಸಿ ಮಾಜಿ ಸದಸ್ಯ ಶಿವಲಿಂಗಯ್ಯ ಮಾತನಾಡಿ ಅಭಿವೃದ್ದಿಗೆ ಬದಲಾವಣೆ ಬಯಸಿರುವ ಜನರ ಮನಗೆಲ್ಲುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ನೂರಾರು ಮಂದಿ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಪ್ರಕಾಶ್, ಗಳಗ ನಾಗರಾಜು, ಹರೀಶ್, ಕೊಡಗಿಹಳ್ಳಿ ಕುಮಾರ್, ಚಂಗಾವಿ ರಾಘವೇಂದ್ರ, ಹುಚ್ಚೇಗೌಡ, ನಂದಕುಮಾರ್, ರಂಗಣ್ಣ, ದೊಡ್ಡಯ್ಯ, ಕೃಷ್ಣಪ್ಪ, ಮುನಿಯಪ್ಪ, ಚಿಕ್ಕಣ್ಣ ಇತರರು ಇದ್ದರು.