ರಾಜರಾಜೇಶ್ವರಿನಗರ: ಮಹಾಮಾರಿ ಕೋರೋನಾ ಸೋಂಕಿನಿಂದ ವಿಶ್ವವೇ ತತ್ತರಿಸಿರುವ ಕಾಲಘಟ್ಟದಲ್ಲಿ ಆರೋಗ್ಯವೇ ಭಾಗ್ಯ ಎಂಬುದು ಮನುಕುಲಕ್ಕೆ ಮನವರಿಕೆಯಾಗಿದೆ ಎಂದು ಶ್ರೀ ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀ ಗುರುಗುಂಡ ಬ್ರಹ್ಮಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಮಹಾಸ್ವಾಮೀಜಿ ತಿಳಿಸಿದರು. ಶ್ರೀ ಆದಿಚುಂಚನಗಿರಿ ವೈದ್ಯಕೀಯ ಮಹಾ ವಿದ್ಯಾಲಯ, ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ ಶಾಂತಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೇರಿ ಹಲವು ವೈದ್ಯಕೀಯ ಸಂಸ್ಥೆಗಳ ಸಹಯೋಗದೊಂದಿಗೆ ಜಯಂತ್ ಸೇವಾ ಫೌಂಡೇಷನ್ ಜ್ಞಾನಭಾರತಿ ವಾರ್ಡ್ ನ ರೈಲ್ವೆ ಬಡಾವಣೆಯಲ್ಲಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದರು. ಆರೆ ವೇ ಭಾಗ್ಯವೇ ಎಂಬುದು ಸಾರ್ವಕಾಲಿಕ ಸತ್ಯವಾಗಿದ್ದರೂ ಉಪೇಕ್ಷಿಸಲ್ಪಟ್ಟಿತ್ತು. ಲಕ್ಷಾಂತರ ಜನರು ಸೋಂಕಿನಿಂದ ಸಾವಿಗೀಡಾಗಿ ಕೋಟ್ಯಾಂತರ ಜನರು ಸೋಂಕಿತರಾಗಿರುವ ಸಂಕಷ್ಟ ಸಮಯದಲ್ಲಿ ಜನತೆಗೆ ಆರೋಗ್ಯದ ಮಹತ್ವ ಅರ್ಥವಾಗಿದೆ ಎಂದರು. ಕೊರೋನಾ 3 ನೇ ಅಲೆ ಕಾಲಿಟ್ಟಿರುವ ಹೊತ್ತಿನಲ್ಲಿ ಜನರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಜಯಂತ್ ಸೇವಾ ಫೌಂಡೇಷನ್ ಉಚಿತ ಬೃಹತ್ ಆರೋಗ್ಯ ಮೇಳ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ ಎಂದರು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವಿಜಯನಗರ ಶಾಖಾಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಮಾತನಾಡಿ ದೈಹಿಕ ಶ್ರಮ ಹಾಗೂ ಮಿತ ಆಹಾರ ಆರೋಗ್ಯದ ಗುಟ್ಟು ಎಂದು ತಿಳಿಸಿದರು. ಜಯಂತ್ ಸೇವಾ ಫೌಂಡೇಶನ್ ನ ವ್ಯವಸ್ಥಾಪಕ ಟ್ರಸ್ಟಿ ಉಮೇಶ್, ರಂಗಣ್ಣ, ಡಾ.ಆಂಜಿನಪ್ಪ, ಶಾಂತಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಶಿವರಾಜ ಗೌಡ ಇತರರು ಇದ್ದರು.
