🖊️ ಬಿ.ಜಿ. ಕೀರ್ತಿ ಶ್ರೀ ಹವ್ಯಾಸಿ ಬರಹಗಾರ್ತಿ 9740716250
ಸರಿ ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಯ ಸಮಯ. ಕಾಂಪೌಡಿನಲ್ಲಿ ಕುಳಿತು ಯಾವುದೋ ಹಳೆಯ ಕಾದಂಬರಿಯೊಂದರ ಪುಟಗಳ ಮೇಲೆ ಬೆರಳಾಡಿಸುತ್ತಿದ್ದೆ. ಟಾರು ರಸ್ತೆಯಲ್ಲಿ ಅನೇಕ ವಾಹನ ಸವಾರರು ಓಡಾಡುತ್ತಿದ್ದರು. ಸೂಪರ್ ಎಕ್ಸೆಲ್ಲೊಂದು ನಿಧಾನವಾಗಿ ಚಲಿಸಿ ನಿಂತು, ಅದರಲ್ಲಿ ಬಂದವರು ಯಾರೋ ಏನೋ ಮಾತಾಡಿಸಲು ಬರುತ್ತಿದ್ದಾರೆನಿಸಿ ಗೇಟಿನ ಬಳಿ ತಲೆ ಎತ್ತಿದೆ, ಹಾಲಿನ ಸಿದ್ದಣ್ಣ ಮತ್ತು ಅವನ ಹೆಂಡತಿ ರಂಗಮ್ಮ ತಮ್ಮ ಏಳು ವರ್ಷದ ಮಗುವಿನೊಂದಿಗೆ ಗೇಟ್ ಸಮೀಪ ಬರುತ್ತಿರುವುದನ್ನು ಮನಗಂಡು, ನಾನೇ ಬೇಗನೆ ಲಗುಬಗೆಯಿಂದ ಕಾದಂಬರಿಯನ್ನು ಪಕ್ಕಕ್ಕೆ ಎತ್ತಿಟ್ಟು ಗೇಟ್ ತೆಗೆದು ಹೊರ ನಡೆದು ಅವರ ಬಳಿ ಅಂತರ ಕಾಯ್ದುಕೊಂಡು ನಿಂತೆ. ಸುಮಾರು ಎರಡು ವರ್ಷಗಳಿಂದ ಮನೆಯ ಬಳಿ ಯಾರಾದರೂ ಬರುತ್ತಿದ್ದಾರೆ ಎನಿಸಿದರೆ ಕೊರೋನಾದಿಂದಾಗಿ ಅಂಗಳದೊಳಗೆ ಬಿಟ್ಟು ಕೊಳ್ಳದೆ ದಾರಿಯಲ್ಲಿ ಮಾತಾಡಿಸಿ ಕಳಿಸುವುದು ರೂಢಿಯಾಗಿದೆ. ತೀರಾ ಆತ್ಮೀಯರಾದವರು ಆರೋಗ್ಯ ಚನ್ನಾಗಿರುವವರಿಗೆ ಮಾತ್ರ ಮನೆಯೊಳಗೆ ಕರೆದು ಮಾತಾಡಿಸುವ ಪರಿಪಾಠವಿದೆ. ಇದು ಕೊರೋನಾದಿಂದ ಕಲಿತಿರುವ ಎಚ್ಚರಿಕೆಯ ಪಾಠ. ಕೆಲವರಿಗೆ ನನ್ನ ಇತ್ತೀಚಿನ ನಡವಳಿಕೆಯಿಂದ ಜಂಭತನ ಅನ್ನಿಸಿದರೂ ನಮ್ಮ ಆರೋಗ್ಯ ಮುಖ್ಯ. ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವ ರೋಗಗಳಿಂದ ನಾವು ದೂರ ಇರಬೇಕಲ್ಲವೇ. ಹೀಗೆ ಹೊರಗೆ ನಡೆದು ಎಲ್ಲಿ ಹೋಗಿದ್ರಿ ಸಿದ್ದಣ ಸಂಸಾರ ಸಮೇತ ತುಂಬಾ ಅಪರೂಪ ಆಯ್ತು ಎಂದೇ, ಅವರಿಬ್ಬರೂ ವಯಸ್ಸಿನಲ್ಲಿ ನಮಗಿಂತ ಕಿರಿಯರು. ಅಕ್ಕ ನನ್ನ ಮಗನಿಗೆ ಜ್ವರ ಆಸ್ಪತ್ರೆಗೆ ಹೋಗಿದ್ವಿ, ಸರ್ಕಾರಿ ಆಸ್ಪತ್ರೆಗೆ ಹೋಗಿ ಇಂಜೆಕ್ಷನ್ ಮಾಡಿಸಿಕೊಂಡು ಬಂದೆವು ಎಂದಳು ರಂಗಮ್ಮ. ನಿಂತಿರುವ ಎಕ್ಸೆಲ್ ಮೇಲೆ ಕುಳಿತಿತ್ತು ರಂಗಮ್ಮ ಸಿದ್ದಣ್ಣ ರ ಮುದ್ದಿನ ಕೂಸು. ಆದರೆ ಮಗು ಹುಷಾರಿಲ್ಲ ಎಂದಾಕ್ಷಣ ನಾನು ಹೌಹಾರಿದೆ. ಈಗ ನಾನು ಗೇಟಿನಿಂದ ಒಳಗೆ ಬಿಟ್ಟುಕೊಳ್ಳದೆ ಅವರು ಬಳಿ ನಾನೇ ಬಂದಿದ್ದು ಸರಿಯೆನಿಸಿತು. ತಕ್ಷಣ ಹೊದಿದ್ದ ದುಪ್ಪಟದಿಂದ ಮೂಗು ಬಾಯಿ ಲಘುವಾಗಿ ಮುಚ್ಚಿಕೊಂಡು ಜ್ವರ ಅಂತಾ ಹೇಳುತ್ತೀರಾ, ಆದರೆ ಮಗುವಿಗೆ ಒಂದು ಮಾಸ್ಕ್ ಹಾಕಿಲ್ಲ, ಮೊದಲು ಮಾಸ್ಕ್ ಹಾಕಿ ಜನ ಇರುವ ಕಡೆ ಬಿಡಬೇಡಿ ಎಂದೆ, ಸರಿ ಎನ್ನುವಂತೆ ತಲೆಯಾಡಿಸಿ ನಸು ನಕ್ಕರು. ಅದೇ ವೇಳೆಗೆ ಊರಿನ ಜನಪ್ರತಿನಿಧಿಯೊಬ್ಬರು ಅದೇ ದಾರಿಯಲ್ಲಿ ಹಾದು ಹೋಗುವಾಗ ನನ್ನ ಮಾತಾಡಿಸಿ ಲೋಕಾರೂಢಿ ಎನ್ನುವಂತೆ ಇವರನ್ನು ಮಾತಾಡಿಸಿದರು. ತಮಾಷೆಗೆ ಸಿದ್ದಣ್ಣ ನಮಗೊಂದು ಮನೆ ಹಾಕಿಸಿಕೊಂಡು ಅಣ್ಣಾ ಎಂದ, ಗ ಆ ವ್ಯಕ್ತಿ ದಾಖಲೆಗಳೆಲ್ಲ ರೆಡಿ ಮಾಡಿಕೊಳ್ಳಿ ಮನೆ ಬಂದಾಗ ಹೇಳುವೆ ಎಂದು ಕಾಲ್ಕಿತ್ತರು. ಆತ ಮುಂದೆ ಹೋಗುತ್ತಿದ್ದಂತೆ ಇವರಿಬ್ಬರೂ ತಮಗೆ ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಯಾವುದೇ ಅನುಕೂಲ ಇಲ್ಲ ನಾವು ಅಣ್ಣ ತಮ್ಮಂದಿರು ಒಬ್ಬರಿಗೊಬ್ಬರು ಮುಖ ನೋಡುವುದಿಲ್ಲ ಈಗ ಹೊಲದಲ್ಲಿ ಚಿಕ್ಕದೊಂದು ಕಲ್ಲು ನಿಲ್ಲಿಸಿಕೊಂಡು ಮನೆಮಾಡಿಕೊಂಡು ವಾಸಿಸುತ್ತಿದ್ದೇವೆ. ರಸ್ತೆಯಿಂದ ಹಲವಾರು ಜನರು ಹೊಲ ದಾಟಿ ನಾವು ಮನೆ ಸೇರಬೇಕು. ಈಗ ನೆರೆಹೊರೆಯ ಹೊಲದವರ ಜೊತೆ ಅನುವು ತನುವಾಗಿದ್ದೇವೆ, ಹಾಗಾಗಿ ಮನೆ ಸೇರಲು ತೊಂದರೆ ಇಲ್ಲ. ಮುಂದೆ ಹೀಗೆ ಎಲ್ಲರ ಹತ್ತಿರ ಚೆನ್ನಾಗಿ ಇರುತ್ತೇವೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಮಗು ಇನ್ನೂ ಚಿಕ್ಕದು, ಎರಡು ಹೂವಿನ ಮೊಗ್ಗು ಬಿಡಿಸಬೇಕು ಜೀವನದ ಬಂಡಿ ನಡೆಯಬೇಕು. ಊರಿನಲ್ಲಿ ನಿವೇಶನವಿದ್ದರೂ ಅದು ಗೊಂದಲದ ಗೂಡಾಗಿದೆ ಎಂದು ನನ್ನ ಬಳಿ ಅಳಲು ತೋಡಿಕೊಂಡರು. ನಾನಿನ್ನು ಏನು ಹೇಳಲು ಸಾಧ್ಯ.ಹೇಗೋ ಇಬ್ಬರೂ ಹೊಂದಿಕೊಂಡು ಹೋದರೆ ಸರ್ಕಾರಿ ಸವಲತ್ತು ಸಿಗುತ್ತವೆ. ಯಾರೋ ಒಬ್ಬರು ನೀವೆ ಅಣ್ಣ ತಮ್ಮ ತಾನೇ ತಿಂದರೆ ತಿನ್ನುವುದು, ಸರಿ ಗಾಡಿ ನಿಲ್ಲಿಸಿದ ಸಮಾಚಾರ ಏನೆಂದು ಕೇಳಿದೆ. ಕೇಳುತ್ತಲೇ ರಂಗಮ್ಮ ಆಸೆ ಕಣ್ಣುಗಳು ಅರಳಿಸುತ್ತಾ, ಅಕ್ಕ ಗಿಡದ ತುಂಬಾ ಅರಳಿರುವ ಹೂವುಗಳು ಕಂಡು ಗುಲಾಬಿ ಮುಡಿಯುವ ಆಸೆಯಾಯಿತು, ಎರಡು ಕೇಳಿ ಪಡೆಯೋಣವೆಂದು ಗಾಡಿ ನಿಲ್ಲಿಸಿದೆವು ಎಂದಳು. ಪಾಪ ಬಡಪಾಯಿ ಹುಡುಗಿ ಯಾವುದಕ್ಕೆ ಆಸೆ ಪಟ್ಟಿದೆ ಎನಿಸಿತು. ನನಗೆ, ಇಲ್ಲೇ ಇರಿ ಕೊರೋನಾ ಅಲೆ ಮತ್ತೆ ಎದ್ದಿರುವುದರಿಂದ ನಾನು ಯಾರನ್ನೂ ಒಳ ಸೇರಿಸುವುದಿಲ್ಲ ಅಪಾರ್ಥ ತಿಳಿಯಬೇಡಿ ಎಂದೇಳಿ ಆಗಲೇ ರಣ ಬಿಸಿಲಿಗೆ ಬಾಡಿ ಬಳಲಿದ್ದ ಸುಮಾರು ಒಂದಿಪ್ಪತ್ತು ಗುಲಾಬಿ ಹೂಗಳನ್ನು ಕಿತ್ತು ತಂದು ಅವಳ ಮಡಿಲಿಗೆ ಹಾಕಿದೆ. ಹೂವುಗಳನ್ನು ಕಂಡು ಅವಳ ಮುಖ ಸಂತಸದಿ ಕುಣಿಯಿತು, ಹೂವುಗಳನ್ನು ಕೊಟ್ಟಿದ್ದಕ್ಕೆ ಕೃತಜ್ಞತೆ ಯ ಭಾವದಿಂದ ನನ್ನೆಡೆ ನೋಡಿದಳು. ಅವಶ್ಯಕತೆ ಇರುವವರಿಗೆ ಅದು ಚಿಕ್ಕ ವಸ್ತುವೇ ಆಗಿರಲಿ ದುಬಾರಿಯಾಗಿ ಕಾಣುತ್ತದೆ. ಈಗಲೋ ಆಗಲೋ ಬಾಡುವ ಗುಲಾಬಿಗಳ ಮಹಾಪ್ರಸಾದ ವೆಂಬಂತೆ ಹಿಡಿದು ಮಧ್ಯದಲ್ಲಿ ಹುಷಾರಿಲ್ಲದ ಮಗನನ್ನು ಹಿಡಿದುಕೊಂಡು ಗಂಡನ ಜೊತೆ ಹೊರಟು ನಗು ಮೊಗವ ಹೊತ್ತು ಮರೆಯಾಗುವ ವರೆಗೂ ಧನ್ಯತಾಭಾವದಿಂದ ನನ್ನ ನೋಡುತ್ತಲೆ ಇದ್ದಳು, ಮಗುವಿನ ಆರೋಗ್ಯದ ಬಗ್ಗೆ ನಿಗಾವಹಿಸುವ ಬಗ್ಗೆ ಮತ್ತೊಮ್ಮೆ ಎಚ್ಚರಿಸಿದಾಗ ಆ ಬಡಪಾಯಿ ದಂಪತಿಗಳಿಬ್ಬರೂ ತಲೆಯಾಡಿಸಿ ಮತ್ತೊಮ್ಮೆ ನಗುವಿನ ಮುಖ ಧರಿಸಿದರು.ಗುಲಾಬಿ ಹೂವಿನ ಮೇಲೆ ರಂಗಮ್ಮಳಿಗಿದ್ದ ಆಸೆಯ ಕಂಗಳ ನೆನೆಸಿಕೊಂಡು ಅಯ್ಯೋ ಎಂತಹುದಕ್ಕೆ ಆಸೆ ಪಟ್ಟ ಹುಡುಗಿ ಈಕೆ ಎಂದೆನಿಸಿತು.
- 🖊️ಕೀರ್ತಿಶ್ರೀ