ಸುಮಾರು ಇಪ್ಪತ್ತು ವರ್ಷಗಳ ನಂತರ ಅಪರಿಚಿತ ದೂರವಾಣಿ ಕರೆಯೊಂದು ನನ್ನ ಕರೆಯಿತು. ಕುತೂಹಲದಿಂದ ರಿಂಗಣಿಸುತ್ತಿದ್ದ ಫೋನ್ ತೆಗೆದೆ. ಅತ್ತಲಿಂದ ಹಲೋ ನಾನು ಲೀಲಾ ಮಾತಾಡ್ತಾ ಇರೋದು , ಬಿಎ ಓದುವಾಗಿನ ಸ್ನೇಹಿತೆ ಗುರುತು ಸಿಕ್ಕಿತಾ ಎಂದಳು. ನನಗೆ ಥಟ್ಟನೆ ಲೀಲಾ ಎಂದಾಕ್ಷಣ ಬಳುಕುವ ಬಳ್ಳಿ, ಉದ್ದನೆಯ ಜಡೆಯ ಹುಡುಗಿ ಎಂದು ಅರ್ಥವಾಯಿತು. ಸಂತೋಷಕ್ಕೆ ಪಾರವೇ ಇರಲಿಲ್ಲ. ಲೀಲಾ ಇಷ್ಟು ವರ್ಷ ಕಳೆದ ಮೇಲೆ ಕಾಲ್ ಮಾಡಿರುವೆ ನಂಬರ್ ಹೇಗೆ ಸಿಕ್ತು ಆರೋಗ್ಯ ತಾನೇ ಎಂದೆ. ಅದಕ್ಕವಳು ಅಮ್ಮಾ ತಾಯೀ, ನಾವು ನಮ್ಮ ಬ್ಯಾಚ್ ನ ಹಳೆಯ ಸ್ನೇಹಿತರ ವಾಟ್ಸಾಪ್ ಗ್ರೂಪ್ ರಚಿಸಿದ್ದೇವೆ. ಗುಂಪು ರಚಿಸಿ ಸುಮಾರು ನಾಲ್ಕು ವರ್ಷಗಳು ಕಳೆದಿವೆ. ನೀವ್ಯಾರೋ ಕೆಲವರು ಮಾತ್ರ ಗ್ರೂಪಿನಲ್ಲಿ ಇಲ್ಲ . ಹೇಗೋ ಪತ್ತೇ ಮಾಡಿ ನಿನ್ನ ನಂಬರ್ ಹುಡುಕಿದೆ, ಎಂದಳು. ನಂತರ ಇಬ್ಬರು ಸುಮಾರು ದಿನಗಳ ನಂತರ ಸಿಕ್ಕಿದ್ದರಿಂದ ಹಲವಾರು ವಿಚಾರಗಳನ್ನು ವಿನಿಮಯ ಮಾಡಿಕೊಂಡೆವು. ಹಾಗೇ ಅವಳು ನನ್ನನ್ನು ಗ್ರೂಪಿಗೆ ಸೇರಿಸಿ ನನ್ನ ಹೆಸರು ಮತ್ತು ಫೋಟೋ ಹಾಕಿದಳು. ಆ ದಿನಗಳಲ್ಲಿ ಸಿರಾ ನನಗೆ ಬಹಳ ಹೊಸದು. ದೂರದ ಸಂಬಂಧಿಗಳು ಬಿಟ್ಟರೆ ಅಷ್ಟಾಗಿ ಹತ್ತಿರದ ಸಂಬಂಧಿಗಳು ಇಲ್ಲಾ, ಸ್ನೇಹಿತರಂತೂ ಇಲ್ಲವೇ ಇಲ್ಲ. ನನ್ನ ತಂದೆಗೆ ಸಿರಾ ಕೋರ್ಟ್ ಗೆ ಶಿರಸ್ತೇದಾರ್ ಆಗಿ ಮಧುಗಿರಿಯಿಂದ ವರ್ಗಾವಣೆಯಾದಾಗ ಅದೇ ವೇಳೆಗೆ ದ್ವಿತೀಯ ಪಿಯುಸಿ ಮುಗಿಸಿದ ನನಗೆ ಸಿರಾ ರಂಗನಾಥ ಪ್ರಥಮ ದರ್ಜೆ ಕಾಲೇಜಿಗೆ ಸೇರುವ ಸೌಭಾಗ್ಯ ದೊರೆತಿತ್ತು. ನಮ್ಮ ಮನೆಯವರೆಲ್ಲ ಮಧುಗಿರಿಯಲ್ಲಿಯೇ, ಬಿಎ ಪದವಿ ಮುಗಿಸಿದರೂ ನಾನು ಮಾತ್ರ ಸಿರಾದಲ್ಲಿ ಕಾಲೇಜಿಗೆ ಸೇರಿದ್ದೆ. ಆಕಸ್ಮಿಕವಾಗಿ ನನ್ನ ತಂದೆಗೆ ಕಾಲೇಜಿನ ಉಪನ್ಯಾಸಕರ ಪರಿಚಯವಾಗಿ ಅವರ ಕೃಪಾಕಟಾಕ್ಷ ದಿಂದ ನಾನು ಸಿರಾದಲ್ಲಿ ಓದುವಂತಾಯಿತು. ಹೀಗೆ ಮೂರು ವರ್ಷ ಕಾಲೇಜಿಗೆ ಬಂದರೂ ಸಹ ಆ ಮೂರುವರ್ಷ ಗಳಲ್ಲಿ ನಾನು ಯಾರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳಲೇ ಇಲ್ಲ. ಮಿತಭಾಷಿ ಮತ್ತು ಸಂಕೋಚದ ಸ್ವಭಾವ ನನಗಾವರಿಸಿದ್ದರಿಂದ ಹೊಸ ಜಾಗ ಯಾರ ಉಸಾಬರಿಯೂ ಬೇಡವೆಂದು ಯಾರನ್ನೂ ಪರಿಚಯಮಾಡಿಕೊಳ್ಳದೆ ತಾನಾಯಿತು ತನ್ನ ಕೆಲಸವಾಯಿತು ಎನ್ನುತ್ತಾ ಒಂದಿಬ್ಬರು ಗೆಳತಿಯರನ್ನು ಬಿಟ್ಟರೆ ಮಿಕ್ಕವರ ಜೊತೆ ಸ್ನೇಹ ಹಂಚಿಕೊಳ್ಳದೇ ಕೊನೆಯವರೆಗೂ ಹಾಗೇ ಉಳಿದೆ. ಇದರಿಂದ ಕಾಲೇಜಿನಲ್ಲಿ ನಾನು ಇದ್ದೂ ಇಲ್ಲದಂತಾಗಿದ್ದೆ. ಹಾಗಾಗಿ ನನ್ನ ಬ್ಯಾಚ್ ನ ಸ್ನೇಹಿತರುಗಳು ಒಂಟಿಯಾಗಿರುತ್ತಿದ್ದ ನನ್ನನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದ್ದರು. ಲೀಲಾ ಮತ್ತು ಹಲವಾರು ಸ್ನೇಹಿತರು ಜೊತೆಗೂಡಿ ಮಾಡಿದ ವಾಟ್ಸಾಪ್ ಗ್ರೂಪಿನಿಂದ ನನ್ನ ಹಳೆಯ ಸ್ನೇಹಿತರ ಗೂಡು ಸೇರಿದೆ, ಆ ಗೂಡಿನಲ್ಲಿ ನಾನು ಸಹ ಚಿಲಿಪಿಗುಟ್ಟಿ ಕಲರವದಿಂದ ಭಾವ ಹೊಳೆಯಲ್ಲಿ ಈಜುತ್ತಿದ್ದೇನೆ. ಕನಸಿನಲ್ಲಿಯೂ ಸಹ ಮರಳಿ ಬಿಎ ವ್ಯಾಸಾಂಗ ಮಾಡುವಾಗ ಇದ್ದ ಮಿತ್ರರನ್ನೆಲ್ಲಾ ಸೇರಿ ಅವರೊಂದಿಗೆ ನಲಿದುಲಿಯುತ್ತೇನೆ ಎಂದುಕೊಂಡಿರಲಿಲ್ಲ. ಮೊದಲಿಗೆ ಈ ಗುಂಪನ್ನು ರಚಿಸಿ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನಕ್ಕೆ ಕೈ ಹಾಕಿದವರಿಗೆ ಕೃತಜ್ಞತೆ ಹೇಳಲೇಬೇಕು.
ಇನ್ನು ಲೀಲಾ ಮೊನ್ನೆ ನನ್ನ ಗ್ರೂಪಿಗೆ ಸೇರಿಸಿ ನನ್ನ ಪರಿಚಯ ಹಾಕಿದಾಗ ಎಲ್ಲರಿಗೂ ಅತ್ಯಾಶ್ಚರ್ಯ. ಈ ಹುಡುಗಿ ನಮ್ಮ ಬ್ಯಾಚಾ ಎಂದರೆ, ಮತ್ತೊಬ್ಬರು ಈ ಹೆಸರೇ ಕೇಳಿಲ್ಲವೆಂದರು. ಒಬ್ಬರಿಗೊಬ್ಬರು ಅವರವರೇ ಮಾತನಾಡಿಕೊಳ್ಳುತ್ತಿದ್ದಾರೆ, ನನಗೂ ನೆನಪಿಲ್ಲ, ನಾನೂ ನೋಡಿಲ್ಲ ವೆಂದು . ಒಂದಿಬ್ಬರು ಗೆಳತಿಯರು ಮಾತ್ರ ವಾದಿಸುತ್ತಿದ್ದಾರೆ ನಮ್ಮ ಜೊತೆಗಾತಿಯೇ, ಅವಳು ಯಾರನ್ನು ಮಾತನಾಡಿಸುತ್ತಿರಲಿಲ್ಲ, ಎಂದು. ಕಾಲೇಜಿನ ಸಂತೋಷಕೂಟ ಸಮಾರಂಭದ ಫೋಟೋದಲ್ಲಿ ಸಹ ನನ್ನ ಗುರುತು ಹಿಡಿಯುವವರೇ ಇಲ್ಲ. ಕೊನೆಗೆ ನಾನೇ ಹೊಸ ಜಾಗವಾದ್ದರಿಂದ ನಾನು ಅಷ್ಟಾಗಿ ಯಾರನ್ನು ಪರಿಚಯ ಮಾಡಿಕೊಳ್ಳಲಿಲ್ಲ, ಮಧುಗಿರಿಯ ಪಕ್ಕ ಹಳ್ಳಿಯಿಂದ ಬರುತ್ತಿದ್ದೇ ಎಂದಾಗ ಗೆಳೆಯನೊಬ್ಬ, ಈಗ ನೆನಪಾಯಿತು ನೀವು ಶಿವಗಂಗಾ ಬಸ್ಸಿನಲ್ಲಿ ಹೋಗುತ್ತಿದ್ದಿರೀ, ಅಲ್ವಾ ಮೇಡಂ ನಾನು ಹೊಟ್ಟೆ ಪಾಡಿಗಾಗಿ ಕಾಲೇಜು ಮುಗಿದ ಮೇಲೆ ಬಸ್ಸಿನಲ್ಲಿ ಟಿಕೇಟ್ ಬರೆಯುತ್ತಿದ್ದೇ, ಈಗ ನೆನಪಾಯಿತು ಎಂದರು. ನಿಜಕ್ಕೂ ಶೋಕಿಗಾಗಿ ಬುರುಡೆ ಬಿಟ್ಟು ಇಲ್ಲ ಸಲ್ಲದ್ದನ್ನು ಹೇಳುವವರ ಮಧ್ಯೆ ಈತನ ಪ್ರಾಮಾಣಿಕ ಹೇಳಿಕೆಯ ಬಗ್ಗೆ ನಿಜಕ್ಕೂ ಹೆಮ್ಮೆ ಅನಿಸಿತು. ದೇವರು ಇಂತವರನ್ನು ಚನ್ನಾಗಿಟ್ಟಿರಲಿ ಎನಿಸಿತು. ಹೀಗೆ ನನ್ನ ಇರುವ ಇಲ್ಲದಿರುವ ಬಗ್ಗೆ ಅಪಾರ ಚರ್ಚೆಗಳು ನಡೆದವು ಕೊನೆಗೆ ಅಟೆಂಡೆನ್ಸ್ ತೆಗೆದು ನೋಡುವುದೆಂಬ ತೀರ್ಮಾನಕ್ಕೆ ಬಂದರು. ಏಕೆಂದರೆ ಕಾಲೇಜು ದಿನಗಳಲ್ಲಿ ಅಷ್ಟು ಮೂಕಳಾಗಿದ್ದೆ. ನಾನು ಸ್ವರ ಹೊರಡಿಸಿ ಮಾತಾಡಿರುವುದನ್ನು ಯಾರೂ ನೋಡಿಯೂ ಇಲ್ಲ. ಹಾಗಾಗಿ ಅಕ್ಷರಶಃ ನಾನು ಯಾರಿಗೂ ನೆನಪಿನಲ್ಲಿರಲಿಲ್ಲ.
ವಾದಗಳು ನಡೆದ ಮಾರನೇ ದಿನ ಮಧ್ಯಾಹ್ನ ಒಂದು ಗಂಟೆಗೆ ಕಾಲೇಜಿನಲ್ಲಿ ನಾವು ಓದುತ್ತಿದ್ದ ವರ್ಷದ ಹಾಜರಾತಿ ಪುಸ್ತಕದ ನನ್ನ ಹೆಸರಿರುವ ಫೋಟೋವೊಂದನ್ನು ತೆಗೆದು ಹಾಕಿದ್ದರು. ನಂತರ ಎಲ್ಲರಿಗೂ ನಾನಿರುವುದು ಖಾತ್ರಿಯಾಗಿತ್ತು. ನನಗೋ ಬೆರಳೆಣಿಕೆಯಷ್ಟು ಹಳೆಯ ಸ್ನೇಹಿತೆಯರು ಮಾತ್ರ ಪರಿಚಯವಿದ್ದರು. ಇವರನ್ನೆಲ್ಲಾ ನೋಡಿದ ನನಗೂ ಹಳೆಯ ಫೋಟೋ ಈಗಿನ ಇವರ ಫೋಟೋ ನೋಡಿದರೆ ಪರಮಾಶ್ಚರ್ಯ ಆಗುತ್ತಿದೆ. ನನಗೆ ಒಂದೂ ನೆನಪಿಲ್ಲದ ಮುಖಗಳು ರಾರಾಜಿಸುತ್ತಿವೆ. ಒಂದು ವರ್ಷದಿಂದ ಮತ್ತೊಂದು ವರ್ಷಕ್ಕೆ ಎಷ್ಟೋ ಬದಲಾವಣೆಗಳು ಆಗುತ್ತಿರುತ್ತವೆ. ಅಂತಹುದರಲ್ಲಿ ಇಪ್ಪತ್ತು ವರ್ಷಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಿರಬಹು ಕಲ್ಪನೆಗೆ ಸಿಗುವುದು ಕಷ್ಟಸಾಧ್ಯ. ಸುನಾಮಿ ಅಲೆಯಲ್ಲಿ ಕೊಚ್ಚಿ ಹೋದ ಗೆಳತಿಯೊಬ್ಬಳು, ಕೊರೋನಾದಿಂದಾಗಿ ಜೀವ ಕಳೆದುಕೊಂಡ ಸ್ನೇಹಿತರು. ಹಲವಾರು ಸಾಧಕರು, ಉದ್ದಿಮೆ ಉದ್ಯೋಗಗಳಲ್ಲಿ ತೊಡಗಿಕೊಂಡವರ ಬಗ್ಗೆ ಕೇಳಿದೆ, ಕೆಲವು ಬೇಜಾರಿನ ಸಂಗತಿಗಳು ಮನಸ್ಸು ಕ್ಷೋಭೆಗೊಳಿಸಿದರೆ, ಕೆಲವು ಸ್ನೇಹಿತರ ಸಾಧನೆ ಮನಸ್ಸಿಗೆ ಹರ್ಷವೆನಿಸಿತು. ಒಟ್ಟಿನಲ್ಲಿ ಸ್ನೇಹಿತೆಯ ಕೃಪೆಯಿಂದ ಮರೆತು ಹೋಗಿದ್ದ ಜೀವನದಲ್ಲಿ ಇನ್ನೆಂದಿಗೂ ಸಿಗಲಾರರು ಅಂದುಕೊಂಡಿದ್ದ ಹಳೆಯ ಸ್ನೇಹಿತರೆಲ್ಲಾ ಸಿಕ್ಕಿದ್ದರೂ ನಿಜಕ್ಕೂ ಸ್ನೇಹಬಂಧನವೆಂದರೇ ಇದೇನಾ ಅನ್ನಿಸಿತು. ಇಂತಹ ಸ್ನೇಹಕ್ಕೆ ಸಾಟಿಯುಂಟೇ, ಸ್ನೇಹ ಸಾಗರದಂತೆ, ಹಲವಾರು ನದಿಗಳು ಸಾಗರ ಸೇರುವಂತೆ ಎಲ್ಲೋ ಹುಟ್ಟಿ ಬೆಳೆದ ನಾವು ಸ್ನೇಹಸಂಬಂಧಗಳ ಮೂಲಕ ಒಂದುಗೂಡಿ ಚಿರಪರಿಚಿತರಾಗುತ್ತೇವೆ. ಗೆಳೆಯ ಗೆಳತಿಯರೇ ಸ್ನೇಹವೆನ್ನುವುದು ಶುದ್ಧ ಮನಸ್ಸಿನಂತೆ, ಸ್ನೇಹದಲ್ಲಿ ಕಲ್ಮಶ ಇರುವುದಿಲ್ಲ. ಸ್ನೇಹದ ನೆನಪುಗಳೇ ಮಧುರ ಅಲೆಗಳು. ಆ ಅಲೆಗಳು ಬಿರುಗಾಳಿಗೆ ಸಿಲುದೆ ತಂಪಾದ ತಂಗಾಳಿಯಲ್ಲಿ ಸಾಗಲಿ.
- 🖊️ಕೀರ್ತಿಶ್ರೀ.ಬಿ.ಜಿ
ivermectin for covid – buy generic tegretol 200mg buy carbamazepine 400mg online