ಕೊರಟಗೆರೆ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಕಟ್ಟಡದ ನವೀಕರಣ ಕಾರ್ಯಕ್ಕೆ
ಮುಂದಾದ ಆಸರೆ ಫೌಂಡೇಶನ್ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ತುಂಬಾ ಹಳೆಯದಾದ ಶಾಲಾ ಕಟ್ಟಡ ಸುಣ್ಣ ಬಣ್ಣ ಇಲ್ಲದೆ ಹಾಗೂ ಒಡೆದು ಹೋಗಿದ್ದ ಗಾಜುಗಳಿಂದ ಕಳೆಗುಂದಿತ್ತು ಇದನ್ನು ಕಂಡ ಆಸರೆ ಫೌಂಡೇಶನ್ ಪದಾಧಿಕಾರಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ತಮ್ಮದುಡಿಮೆಯ ಸ್ವಂತ ಹಣವನ್ನು ಕೈಲಾದಷ್ಟು ವ್ಯಯಿಸಿ ಸುಣ್ಣಬಣ್ಣ ಬಳಿಸಿ ಹಾಗೂ ಗಾಜುಗಳನ್ನು ಪುನರ್ ಸ್ಥಾಪಿಸಿ ಶಾಲೆಯನ್ನು ಕಂಗೊಳಿಸುವಂತೆ ಮಾಡಿದ್ದಾರೆ ಈ ಕಾರ್ಯನಾಗರೀಕರ ಶ್ಲಾಘನೆಗೆ ಕಾರಣವಾಗಿದೆ.
ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್ ಹಳೆ ವಿದ್ಯಾರ್ಥಿಗಳೆಲ್ಲಾ ಸೇರಿಕೊಂಡು ಶಾಲೆಯ ಅಭಿವೃದ್ಧಿಗೆ ಮನಸ್ಸು ಮಾಡಿರುವುದು ಸಂತಸದ ವಿಚಾರ. ಪ್ರತಿಯೊಬ್ಬರು ತಾನು ಓದಿದ ಶಾಲೆಗೆ ಅಳಿಲು ಸೇವೆ ಮಾಡಬೇಕೆಂಬ ಮನಸ್ಸು ಮಾಡಿದರೆ ಎಲ್ಲ ಶಾಲೆಗಳು ಸುಸಜ್ಜಿತಗೊಂಡು ಮುಂದಿನ ಯುವ ಪೀಳಿಗೆಗೆ ವಿದ್ಯಾಭ್ಯಾಸ ಮಾಡಲು ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದು ಹೇಳಿದರು.
ಆಸರೆ ಫೌಂಡೇಶನ್ ಅಧ್ಯಕ್ಷ ಹೊನ್ನೇಶ್ ಮಾತನಾಡಿ ಹಳೆಯ ವಿದ್ಯಾರ್ಥಿಗಳು ಹಾಗೂ ಆಸರೆ ಫೌಂಡೇಶನ್ ಕಾರ್ಯಕರ್ತರು ಈ ಶಾಲೆಯ ದುಃಸ್ಥಿತಿಯನ್ನು ಕಂಡು ಉತ್ತಮ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಯೋಜನೆಗೆ ಮುಂದಾಗಿದ್ದಾಗಿ ತಿಳಿಸಿ ಇನ್ನೂ ಶಾಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗಬೇಕಿದ್ದು ಇನ್ನುಳಿದ ಹಳೆಯ ವಿದ್ಯಾರ್ಥಿಗಳ ನೆರವು ಪಡೆದು ಪೂರ್ಣಗೊಳಿಸುವ ಭರವಸೆ ಇದೆಯೆಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಆಸರೆ ಫೌಂಡೇಶನ್ ಪದಾಧಿಕಾರಿಗಳಾದ ಪ್ರಸನ್ನಕುಮಾರ್, ಭೀಮರಾಜು, ಕಾಂತರಾಜು ಉಮೇಶ್ ಸುನಿಲ್ ಕುಮಾರ್ ಆನಂದ್ ಮಲ್ಲೇಶ್, ಹಳೆಯ ವಿದ್ಯಾರ್ಥಿಗಳ ಸಂಘದ ಮಾನಸ, ಮಂಜುಳಾ, ಭವ್ಯ, ಶಾಲಿನಿ, ಶಾಲಾ ಉಪಪ್ರಾಂಶುಪಾಲ ಚೈತ್ರ, ಶಾಲಾ ಶಿಕ್ಷಕ ಶಿಕ್ಷಕಿಯರು ಹಾಜರಿದ್ದರು