SHARE

Loading

ಸಿರಾ ತಾಲೂಕಿನ ಎಲ್ಲಾ ಜನಪ್ರತಿನಿಧಿಗಳು, ಮಠಾಧೀಶರು, ನೀರಾವರಿ ಹೋರಾಟಗಾರರು ,ಸಂಘಟನೆಗಳು ,ರೈತ ಸಂಘ ಹಾಗೂ  ಇತರೆ ಸಾಮಾಜಿಕ ಹಿತಚಿಂತಕರುಗಳಲ್ಲಿ ನಿವೃತ್ತ ಇಂಜಿನಿಯರ್ ಚಿಕ್ಕಬಾಣಗೆರೆ ಆರ್.ಜಯರಾಮಯ್ಯನ ಬಿನ್ನಹಪೂರಕ ನಮನಗಳು,

ಏನೆಂದರೆ, ಸಿರಾ ತಾಲ್ಲೂಕಿನ ಕೆಲವು ಕೆರೆಗಳಿಗೆ ಹೇಮಾವತಿ ನಾಲೆಯಿಂದ  ಕಳ್ಳಂಬೆಳ್ಳ ಕೆರೆ, ಸಿರಾ ಕೆರೆ, ಮೊದಲೂರು ಕೆರೆ ಮುಂತಾದ ಹಲವು ಕೆರೆಗಳಿಗೆ 0.90 ಟಿಎಂಸಿ ನೀರು ಭರಿಸಲು, 1999ರಲ್ಲಿ ಸರ್ಕಾರದ ಆದೇಶದಂತೆ ಹಂಚಿಕೆ ಮಾಡಲಾಗಿದೆ. ಈ ವ್ಯವಸ್ಥೆಯನ್ವಯ ನಮಗೆ ಭವಿಷ್ಯದ ವರ್ಷಗಳಲ್ಲಿ ಅತ್ಯಂತ ಭರವಸೆಯುಳ್ಳದ್ದಾಗಿಯೂ, ನಿರಾಂತಕವಾಗಿಯೂ ನೀರು ಬರುತ್ತಾ ಇರುತ್ತದೆ. ಆ ಭಾಗದ ಎಲ್ಲಾ ಕೆರೆಗಳಿಗೆ ಪೂರ್ಣ ನೀರು ತುಂಬಿಸಿಕೊಳ್ಳುವ ಭರವಸೆ ಖಂಡಿತಾ ಇರುತ್ತದೆ. ಇದೀಗ ಭದ್ರಾ ಮೇಲ್ದಂಡೆ ಯೋಜನೆಯ ಕೊಳಾಯಿ ಜೋಡಣೆಯನ್ನು ಸಹಾ ಕಳ್ಳಂಬೆಳ್ಳ ಕೆರೆಯ‌ ಕಡೆಗೆ ತಿರುಗಿಸಿ  ಮೊದಲೂರು ಕೆರೆಯ ಮಾರ್ಗವಾಗಿ ಅಲ್ಲಿಂದ ಮುಂದಕ್ಕೆ ಇರುವ ಗೌಡಗೆರೆ ಹೋಬಳಿಯ ಮತ್ತು ಹುಲಿಕುಂಟೆ ಹೋಬಳಿಯ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು  31%ರಷ್ಟು ತುಂಬಿಸುವ ಕಾಮಗಾರಿಯನ್ನು ಪ್ರಾರಂಭಿಸಿರುವುದು, ತಮಗೆ ತಿಳಿದಿರುವ ವಿಷಯ.

 ಈ ಯೋಜನೆಯಲ್ಲಿ ಕಳ್ಳಂಬೆಳ್ಳ ಕೆರೆಯಿಂದ ಮೊದಲೂರು ಕೆರೆಯವರೆಗಿನ ನಾಲೆಯಡಿಯಲ್ಲಿ ಇರುವ ಎಲ್ಲಾ ಕೆರೆಗಳೂ ಒಳಗೊಂಡಂತೆ ಒಟ್ಟು 62 ಕೆರೆಗಳಿಗೆ 31% ಮಾತ್ರ ತುಂಬಿಸುತ್ತೇವೆ ಎಂದು ಇಂಜಿನಿಯರ್ ಗಳು ಮತ್ತು ಗುತ್ತಿಗೆದಾರರು ಅಂದಾಜಿಸಿದ್ದಾರೆ. ಆದರೆ  ಈ ಕಾಮಗಾರಿಯು ಬಹಳ ಅವೈಜ್ಞಾನಿಕವಾಗಿದೆ. ಹಾಗೂ ಅಂದಾಜಿಸಿರುವ ನೀರು ಬರುವುದು ಬಹುತೇಕ ಅನಿಶ್ಚಿತ ಎಂದೇ ಊಹಿಸಬಹುದು ಹಾಗೂ ಈ ಯೋಜನೆಯ ಪರಿಣಾಮವಾಗಿ ಹೇಮಾವತಿ ನಾಲೆಯಿಂದ ಬಿಡುವ ನೀರನ್ನು ನಿಲುಗಡೆ ಮಾಡುವ ಕುತಂತ್ರಕ್ಕೆ ಸಿರಾ ಸೀಮೆಯ ಜನ ಬಲಿಯಾಗುತ್ತೇವೆ, ಎಂಬುದರಲ್ಲಿ ಸಂದೇಹವೇ ಇಲ್ಲ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅನಗತ್ಯ ವೆಚ್ಚ 500 ಕೋಟಿ ಉಳಿತಾಯ ಮಾಡಿದಂತಾಗುತ್ತದೆ,ಆದ್ದರಿಂದ  ಅನಿಶ್ಚಿತವಾಗಿರುವ, ಅವೈಜ್ಞಾನಿಕವಾಗಿರುವ ಭದ್ರಾ ಮೇಲ್ದಂಡೆ ಯೋಜನೆಯ ಕೊಳಾಯಿ ಜೋಡಣೆಯನ್ನು,ಹಾಲೀ ಹೇಮಾವತಿ ನಾಲೆಯ ಅಡಿಯಲ್ಲಿ  ಪ್ರಯೋಜನ  ಪಡೆ ಯುತ್ತಿರುವ ಕೆರೆಗಳ ಪ್ರದೇಶಕ್ಕೆ, ಪ್ರವೇಶ ಮಾಡಿಸಿದಂತೆ, ಸದರಿ ಕೊಳಾಯಿ ಮಾರ್ಗವನ್ನು ಪ್ರತ್ಯೇಕವಾಗಿರುವಂತೆ, ಹುಯಿಲ್ದೊರೆ ಮರಡಿಗುಡ್ಡದ ಬುಡದಿಂದ, ಮಾರ್ಗ ಬದಲಿಸಿಕೊಂಡು ಮುದಿಗೆರೆ ಕೆರೆ, ಕಲ್ಲುಕೋಟೆ ಕೆರೆ, ಓಜುಗುಂಟೆ, ಕೊಟ್ಟ, ಇನಕನಹಳ್ಳಿ ಮೂಲಕ  ಮೊದಲೂರು ಕೆರೆಯ ಮುಂದಕ್ಕೆ ಇರುವ ಉಳಿಗೆರೆ ಕೆರೆಗೆ ನೇರ ಸಂಪರ್ಕಿಸಿ, ಅಲ್ಲಿಂದ ಮುಂದಕ್ಕೆ ಸಿರಾ ತಾಲೂಕಿನ ಉಳಿದ ಎಲ್ಲಾ ಕೆರೆಗಳಿಗೆ ನೀರು ಹರಿಸಬಹುದು,.

ಭೌಗೋಳಿಕ ಮತ್ತು ತಾಂತ್ರಿಕ ಮಾರ್ಗವನ್ನು ತಾಂತ್ರಿಕ ನಕ್ಷೆ ಮತ್ತು ವಿವರಣೆಗಳುಳ್ಳ ವರದಿ ತಯಾರಿಸಿ, ಸಂಭಂದಿಸಿದ ಇಂಜಿನಿಯರ್ ಗಳಿಗೆ 30.7.2021 ರಂದು ನ್ಯಾಯಾಗ್ರಹ ನೋಟೀಸು ಜಾರಿ ಮಾಡಿದೆ. ಅಂದಿನಿಂದ ಇಂದಿನವರೆಗೂ ಅವರು ಕೇಳಿದ್ದ ಅವಶ್ಯ ಮಾಹಿತಿಗಳನ್ನು ಒದಗಿಸಿ ಕೊಟ್ಟಿದೆ ಆದ್ದರಿಂದ  ಉನ್ನತಾಧಿಕಾರಿಗಳು ನಮ್ಮ ಸಲಹೆಗಳನ್ನು ಪರಿಗ್ರಹಿಸಿ, ಅನುಮೋದಿಸುವ ಬಗ್ಗೆ 14-1-22 ಶುಕ್ರವಾರದಂದು ಸಭೆ ಕರೆದಿದ್ದಾರೆ. ಸದರಿ ಪತ್ರದ ಪ್ರತಿಯನ್ನು ಗಮನಿಸಿರಿ.ಆದ್ದರಿಂದ ಈ ಸಭೆಯಲ್ಲಿ ತಾವು ಭಾಗವಹಿಸಬೇಕೆಂದೂ, ನಾವು ಮಂಡಿಸಿರುವ ಸಲಹೆಗಳನ್ನು ಪ್ರತಿಪಾದಿಸಿ ಬೆಂಬಲಿಸಬೇಕು, ಎಂದು ವಿನಂತಿಸಿಕೊಳ್ಳುತ್ತೇನೆ,

ವಂದನೆಗಳು,

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿರಿ, ಆರ್.ಜಯರಾಮಯ್ಯ

ನಿವೃತ್ತ ಇಂಜಿನಿಯರ್ ಚಿಕ್ಕಬಾಣಗೆರೆ  9343803118

By admin

Leave a Reply

Your email address will not be published. Required fields are marked *

Translate »