ಕೊರಟಗೆರೆ:-ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಿಂದ ಹೊರವಲಯದ ಸಿದ್ದೇಶ್ವರ ಸಮುದಾಯ ಭವನದ ವರಗೆ ಹಾದುಹೋಗುವ ಬೈಪಾಸ್ ರಸ್ತೆಯಲ್ಲಿ 5 ಜಂಕ್ಷನ್ ರಸ್ತೆ ಇದ್ದು, ಈ ರಸ್ತೆಗಳಲ್ಲಿ ಹೈಮಾಸ್ಕ್ ದೀಪಗಳನ್ನು ಅಳವಡಿಸಿದ್ದು, ಅವುಗಳು ಕಾರ್ಯನಿರ್ವಹಿಸುತ್ತಿಲ್ಲ ಆದ್ದರಿಂದ ಈಭಾಗದಲ್ಲಿ ರಾತ್ರಿ ಸಂಚರಿಸುವ ಸಾರ್ವಜನಿಕರಿಗೆ ಸಂಚಾರ ಸವಾಲಾಗಿದೆ.
ಹೈಮಾಸ್ಕ್ ದೀಪಗಳು ನಿಷ್ಕ್ರಿಯಗೊಂಡು ಸಾರ್ವಜನಿಕರು ರಾತ್ರಿ ವೇಳೆ ಸಂಚರಿಸಲು ಇಲ್ಲಿ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮಾಹಿತಿ ಇದ್ದರೂ ಸಹ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಮುಖ್ಯಾಧಿಕಾರಿ ವಿಚಾರಿಸಲಾಗಿ ಕೆಶಿಪ್ ಅಧಿಕಾರಿಗಳು ಅವುಗಳನ್ನು ನಿರ್ವಹಿಸುತ್ತಿರುವುದು. ನಮಗೆ ಪಟ್ಟಣದಲ್ಲಿರುವವು ಮಾತ್ರ ಎಂದು ಹೇಳುತ್ತಾರೆ.
ಕೆಶಿಪ್ ಅಧಿಕಾರಿಗಳು ಕಾಮಗಾರಿ ಪೂರ್ಣಗೊಂಡ ನಂತರ ನಾವು ಪಟ್ಟಣ ಪಂಚಾಯ್ತಿಗೆ ಒಪ್ಪಿಸಿರುತ್ತೇವೆ ಎಂದು ಒಬ್ಬರಮೇಲೊಬ್ಬರು ಕೆಸರೆರಚಾಟ ಮಾಡುತ್ತಿದ್ದು ಸಾವಿರಾರು ಜನರು, ದ್ವಿಚಕ್ರ ವಾಹನಗಳು ಓಡಾಡುವ ರಸ್ತೆಯಾಗಿದ್ದು, ಈ ಭಾಗ ತಾಲ್ಲೂಕಿನ ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಕಾರಣ ರಾತ್ರಿಯೂ ಈ ರಸ್ತೆಯಲ್ಲಿ ವಾಹನಗಳು, ಸಾರ್ವಜನಿಕರ ಓಡಾಟ ಇದ್ದೇ ಇರುತ್ತದೆ. ಈ ಹೈಮಾಸ್ಕ್ ದೀಪಗಳು ಸರಿಯಾಗಿ ಉರಿಯದ ಕಾರಣ ಓಡಾಟಕ್ಕೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಆಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯ.